Saturday, December 25, 2010

ಬೀಡಿ ಕಟ್ಟಿ ಎಂಜಿನಿಯರ್ ಆದೆ...

ಕಡು ಬಡತನದ ಕುಟುಂಬದಲ್ಲಿ ಜನಿಸಿ, ಬಡತನದ ನಡುವೆಯೇ ಬೆಳೆದು, ನಾಲ್ಕನೆ ತರಗತಿಯಲ್ಲಿ ಔಪಚಾರಿಕ ಕಲಿಕೆ ನಿಲ್ಲಿಸಿ, ಬೀಡಿ ಕಟ್ಟಿ, ಸ್ವತಃ ಕಲಿತು, ಪಯ್ಯನ್ನೂರ್ ನಗರಸಭೆ ಎಂಜಿನಿಯರ್ ಹುದ್ದೆಯವರೆಗೆ ಸಾಗಿತ ತಂಬಾನ್ ಎಂಬವರ ಜೀವನದ ಕಥೆ.
***

‘‘ಪ್ರಿಯ ಸಹೋದ್ಯೋಗಿಗಳೆ, ಇಂದು ನನ್ನ ಔದ್ಯೋಗಿಕ ಜೀವನ ಕೊನೆಗೊಳ್ಳುತ್ತಿದೆ. ಈ ಬೀಳ್ಕೊಡುಗೆ ಸಂದರ್ಭದಲ್ಲಿ ಒಂದು ಕಥೆ ಹೇಳಿ ಎಲ್ಲರ ಸಂತೋಷವನ್ನು ಹಾಳು ಮಾಡಬೇಕೆಂಬ ಉದ್ದೇಶ ನನಗಿಲ್ಲ.
ಓರ್ವ ಒರಟು ಸ್ವಭಾವದ ವ್ಯಕ್ತಿಯಾಗಿ ನೀವು ನನ್ನನ್ನು ಕಂಡಿದ್ದೀರಿ. ನಾನು ನಿಮ್ಮಿಂದಿಗೆ ವರ್ತಿಸಿದ್ದೂ ಹಾಗೆಯೇ. ಅಂದರೆ ಪೋತ್ತೇರ ತಂಬಾನ್ ಎಂಬ ನಾನು ಏಕೆ ಒರಟು ವ್ಯಕ್ತಿಯಾದೆ ಎಂದು ನೀವು ತಿಳಿದರೆ ಒಳ್ಳೆಯದೆಂದು ಅನ್ನಿಸುತ್ತಿದೆ.
ನಾಲ್ಕನೆ ಕ್ಲಾಸಿನಲ್ಲಿ ಕಲಿಕೆ ನಿಲ್ಲಿಸಿ ಬೀಡಿ ಕಟ್ಟಲು ಹೋದ ನಾನು ಹೇಗೆ ಪಯ್ಯನ್ನೂರ್ ನಗರಸಭೆ ಎಂಜಿನಿಯರ್ ಹುದ್ದೆಯ ತನಕ ತಲುಪಿದೆಯೆಂದು ಯಾರಿಗೂ ಬೇಸರ ತರಿಸದೆ ಸಂಕ್ಷಿಪ್ತವಾಗಿ ಹೇಳಿ ಮುಗಿಸುತ್ತೇನೆ.
ಪಯ್ಯನ್ನೂರ್ ರಾಮನ್ ನಂಬಿಯಾರ್ ಹಾಗೂ ಪೋತ್ತೇರ ಕುಞ್ಞಿಣಿ ಅಮ್ಮ ದಂಪತಿಯ ಮಗನಾದ ನನ್ನ ಬಾಲ್ಯ ಕಡುಬಡತನದಿಂದ ಕೂಡಿತ್ತು. ದೊಡ್ಡ ಸಹೋದರಿ ಅಂತರ್‌ಜಾತಿಯ ವಿವಾಹವಾಗಿದ್ದರಿಂದ ಮನೆತನದಿಂದ ದೂರವಾಗಬೇಕಾಗಿ ಬಂತು. ಅನ್ನೂರ್ ಯುಪಿ ಶಾಲೆಯಲ್ಲಿ ನಾಲ್ಕನೆ ತರಗತಿಯಲ್ಲಿ ಕಲಿಯುತ್ತಿರುವಾಗ ತಂದೆ ತೀರಿ ಹೋದರು. ಇದರಿಂದಾಗಿ ವಿದ್ಯಾಭ್ಯಾಸ ನಿಲ್ಲಿಸಿದೆ. ಅಲ್ಲಿಯ ತನಕ ತಾಯಿ ಕೆಲಸಕ್ಕೆ ಹೋಗುತ್ತಾ ಇದ್ದರು. ಆದರೆ, ದೃಷ್ಟಿ ನಷ್ಟವಾದ್ದರಿಂದ ಕೆಲಸ ಮಾಡಲು ಸಾಧ್ಯವಿಲ್ಲದಂತಾಯಿತು.
ಕಲಿಕೆ ನಿಲ್ಲಿಸಿದ ಮರುದಿನ ನಾನು ಬೀಡಿ ಕಂಪೆನಿಗೆ ಹೋದೆ. ತಾಯಿಯ ಹೊಟ್ಟೆ ತುಂಬಬೇಕಾದರೆ ನಾನು ಕೆಲಸಕ್ಕೆ ಹೋಗುವುದು ಅನಿವಾರ್ಯವಾಯಿತು. ಹೊಟ್ಟೆ ತುಂಬಾ ಉಂಡ ತಾಯಿಯ ಮುಖದಲ್ಲಿನ ನೆಮ್ಮದಿ ನನ್ನ ವಿದ್ಯಾಭ್ಯಾಸಕ್ಕಿಂತ ಮುಖ್ಯವೆಂದು ನನಗೆ ಅನಿಸಿತ್ತು.
ಕಣ್ಣಿನ ಪೊರೆಯಿಂದ ದೃಷ್ಟಿ ಕಳೆದುಕೊಂಡ ಅಮ್ಮ, ನನ್ನಗೆ ಹೆಚ್ಚು ತೊಂದರೆ ನೀಡಲು ಇಚ್ಛಿಸದೆ ಒಂದು ತುಂಡು ಹಗ್ಗದಲ್ಲಿ ಬದುಕನ್ನು ಕೊನೆಗೊಳಿಸಿದರು. ತಂದೆ ಸಾಯುವುದಕ್ಕಿಂತ ಮೊದಲೇ ಎರಡನೆ ಸಹೋದರಿಯ ವಿವಾಹವಾಗಿತ್ತು. ತಾಯಿಯ ಸಾವಿನೊಂದಿಗೆ ನಾನು ಪೂರ್ತಿ ಒಂಟಿಯಾಗಿ ಬಿಟ್ಟೆ.
ಇನ್ನು ಯಾರಿಗಾಗಿ ಬದುಕಬೇಕು....?
ಬೀಡಿಯ ಕೆಲಸವನ್ನು ತೊರೆದು ಕೊಯಂಬತ್ತೂರಿಗೆ ಹೋದೆ. ಅಲ್ಲಿ ಕೆ.ಕೆ.ಅಡಿಯೋಡಿಯ ಮನೆಯಲ್ಲಿ ಕೆಲಸಕ್ಕೆ ನಿಂತೆ. ನೆರೆಮನೆಯ ಮಕ್ಕಳು ಕಲಿಯುವುದನ್ನು ನೋಡಿದಾಗ ನನಗೂ ಕಲಿಯಬೇಕೆನ್ನುವ ಆಶೆಯುಂಟಾಯಿತು. ಅದಕ್ಕಾಗಿ ನಾನು ತೃಕ್ಕರಿಪುರದಲ್ಲಿರುವ ನನ್ನ ತಂಗಿಯ ಮನೆಗೆ ಹೋದೆ. ಆದರೆ ಅಲ್ಲಿ ಕಲಿಯಲಾಗಲಿಲ್ಲ. ಅಲ್ಲಿ ಬೀಡಿ ಕಟ್ಟುವುದು ಮತ್ತು ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಮತ್ತೆ ಊರು ತೊರೆದೆ. ಈ ಬಾರಿ ಮಂಗಳೂರಿಗೆ ರೈಲು ಹತ್ತಿದೆ. ಅಲ್ಲಿ ಹೊಟೇಲ್‌ನಲ್ಲಿ, ಮೆಸ್‌ನಲ್ಲಿ ಕೆಲಸ ಮಾಡುತ್ತಾ ಬೀಡಿ ಕಟ್ಟಲು ಶುರು ಮಾಡಿದೆ.
ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಅಡುಗೆ ಮಾಡುವ ಕೆಲಸ ಸಿಕ್ಕಿತು. ಬರೆಯಲು ಓದಲು ತಿಳಿಯದ ವೇದನೆ ಪ್ರತಿನಿತ್ಯ ನನ್ನನ್ನು ಚುಚ್ಚುತ್ತಿತ್ತು. ಮೆಸ್‌ನಲ್ಲಿ ಊಟ ಮಾಡಲು ಬರುವವರು ಇಂಗ್ಲಿಷ್‌ನಲ್ಲಿ ಕೇಳುವಾಗ ಉತ್ತರ ಹೇಳಲಾಗದೆ ದುಃಖವಾಗುತ್ತಿತ್ತು. ರಾತ್ರಿ ವೇಳೆ ಒಬ್ಬನೇ ಕುಳಿತು ಅಳುತ್ತಿದ್ದೆ.
ಈ ಮಧ್ಯೆ ಒಂದು ಪತ್ರಿಕೆಯಲ್ಲಿ ಜಾಹೀರಾತೊಂದನ್ನು ನೋಡಿದೆ. ಜೀವನದಲ್ಲಿ ಬೆಳಕನ್ನು ಬೀರಲು ಬಂದ ಜಾಹೀರಾತು. ಕೋಟ್ಟಯಂ ಪ್ರಕಾಶ್ ಕಾಲೇಜಿನ ಅಧೀನದಲ್ಲಿರುವ ವೆಟ್ಟಂ ಮಾಣಿಯ ಅಂಚೆ ತೆರಪಿನ ಶಿಕ್ಷಣದ ಜಾಹೀರಾತು. ಎಸೆಸೆಲ್ಸಿ ತನಕ ಅಂಚೆಯ ಮೂಲಕ ಕಲಿಯಬಹುದು. ಮತ್ತೆ ತಡ ಮಾಡಲಿಲ್ಲ, ಅರ್ಜಿ ಸಲ್ಲಿಸಿದೆ. ಅಂಚೆಯ ಮೂಲಕ ಬರುವ ಪಠ್ಯಗಳಿಗಾಗಿ ಕಾದು ಕುಳಿತೆ. ಎರಡು ವರ್ಷಗಳಲ್ಲಿ ಇಂಗ್ಲಿಷ್, ಗಣಿತ ಎಲ್ಲ ಕಲಿತೆ.
ಮಂಗಳೂರಿನ ಕೆಲಸ ಬಿಟ್ಟು ಊರಿಗೆ ತೆರಳಿದೆ. ತಂಗಿಯ ಮನೆಯಲ್ಲಿ ಉಳಿದು ಬೀಡಿ ಕಟ್ಟಲು ಶುರು ಮಾಡಿದೆ. ರಾತ್ರಿ ವೇಳೆ ಅಧ್ಯಯನ. ಎಸೆಸೆಲ್ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಹೈಸ್ಕೂಲ್ ಮುಖ್ಯೋಪಾಧ್ಯಯರು ಶಿಫಾರಸು ಮಾಡಬೇಕು. ನಾನು ಶಿಕ್ಷಕ ಭರತ್‌ರನ್ನು ಭೇಟಿಯಾದೆ.
ನಾಲ್ಕನೆ ತರಗತಿ ಪೂರ್ತಿ ಮಾಡದ ನೀನು ಹೇಗೆ ಎಸೆಸೆಲ್ಸಿಗೆ ಕುಳಿತುಕೊಳ್ಳುತ್ತಿ? ಅವರ ಪ್ರಶ್ನೆಯ ಮುಂದೆ ನನ್ನ ಆತ್ಮವಿಶ್ವಾಸ ಕುಸಿಯಿತು. ಸಂಬಂಧಿ ಶಿಕ್ಷಕ ಪಿ.ಬಾಲನ್‌ರನ್ನು ಕರೆದುಕೊಂಡು ಹೋದರೂ ಅವರಿಗೆ ನಂಬಿಕೆ ಬರಲಿಲ್ಲ. ಕೊನೆಗೆ ಶಿಕ್ಷಕರ ವತಿಯಿಂದ ಸಂದರ್ಶನ ನಡೆಯಿತು. ಹಲವು ಪ್ರಶ್ನೆಗಳನ್ನು ಕೇಳಿದರು. ಉತ್ತರಗಳೆಲ್ಲ ಸರಿಯಾಗಿದ್ದರಿಂದ ಶಿಕ್ಷಕ ಭರತ್ ಒಳ್ಳೆಯ ಮನಸ್ಸು ತೋರಿಸಿದರು. 1974ರಲ್ಲಿ ಪಯ್ಯನ್ನೂರ್ ಬಾಯ್ಸೆ ಹೈಸ್ಕೂಲ್‌ನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದೆ. ಫಲಿತಾಂಶ ಬಂದಾಗ ನಾನು ಇಂಗ್ಲಿಷ್ ಮತ್ತು ಗಣಿತದಲ್ಲಿ ಫೇಲಾಗಿದ್ದೆ. ಆರು ತಿಂಗಳ ಬಳಿಕ ಪರೀಕ್ಷೆ ಬರೆದು ಉತ್ತೀರ್ಣನಾದೆ. ಆಗಲೂ ನನ್ನ ಕಷ್ಟ ಮುಂದುವರಿದಿತ್ತು. ಎಲಿಜಿಬ್‌ಲ್ ಫಾರ್ ಪಬ್ಲಿಕ್ ಸರ್ವೀಸ್ ಓನ್ಲಿ ಎಂದು ಸರ್ಟಿಫಿಕೆಟ್‌ನಲ್ಲಿ ಬರೆದಿತ್ತು. ಅದನ್ನು ಹಿಡಿದುಕೊಂಡು ಮುಂದಿನ ವಿದ್ಯಾಭ್ಯಾಸ ಅಸಾಧ್ಯವಾಗಿತ್ತು. ಹಾಗೆ ಮತ್ತೆ ಎಸೆಸೆಲ್ಸಿ ಪರೀಕ್ಷೆಗೆ ಕುಳಿತೆ. ಎಲ್ಲ ವಿಷಯಗಳಲ್ಲಿ ಉತ್ತೀರ್ಣನಾಗಿ ಕಾಲೇಜು ಸೇರಲು ಅರ್ಹತೆ ಪಡೆದೆ. ಆ ಮಧ್ಯೆ ಹೃದಯ ಬೇನೆ ಶುರುವಾಗಿ ಹಾಸಿಗೆ ಹಿಡಿದೆ. ಔಷಧಿಗೆ ಮತ್ತು ಖರ್ಚಿಗೆ ಪುನಃ ಬೀಡಿ ಕಟ್ಟಲು ಶುರು ಮಾಡಿದೆ.
ತಾಯಿಯಿಂದ ಬಂದ 15.50 ಸೆಂಟ್ಸ್ ಜಾಗವನ್ನು 1350 ರೂ.ಗೆ ಮಾರಿ ಕಣ್ಣೂರು ಸರಕಾರಿ ಐಟಿಐ ಸರ್ವೇಯರ್ ಕೋರ್ಸ್‌ಗೆ ಸೇರಿದೆ. ರಜಾ ದಿನಗಳಲ್ಲಿ ಬೀಡಿ ಕಟ್ಟಲು ತೊಡಗಿದೆ. ಅಧ್ಯಾಪಕರು ತುಂಬಾ ಸಹಾಯ ಮಾಡಿದರು. ಲೋರಂಟೀನ ಹಾಗೂ ಎಮಿಲ್ ಟೀಚರ್ ನೀಡಿದ ನೆರವನ್ನು ಮರೆಯಲು ಸಾಧ್ಯವಿಲ್ಲ. ಎರಡು ವರ್ಷದ ಕೋರ್ಸ್‌ನಲ್ಲಿ ಉತ್ತೀರ್ಣನಾದರೂ ಎಲ್ಲಿಯೂ ಕೆಲಸ ಸಿಗಲಿಲ್ಲ. ಗಣಿತ ನನ್ನ ಇಷ್ಟದ ವಿಷಯವಾಗಿತ್ತು. ಆದ್ದರಿಂದ ಮಾತಮಂಗಲದಲ್ಲಿ ಎಸ್.ಎಂ.ಟ್ಯುಟೋರಿಯಲ್‌ನಲ್ಲಿ ಗಣಿತ ಶಿಕ್ಷಕನಾದೆ. ಸುತ್ತುವರಿದಿದ್ದ ಸಂಕಷ್ಟಗಳು ಆಗಲೂ ನನ್ನನ್ನು ಬಿಟ್ಟು ಹೋಗಿರಲಿಲ್ಲ. ಕೊನೆಗೆ ಮೈಸೂರಿನ ಶ್ರೀ ವೆಂಕಟೇಶ್ವರ ಲಾಡ್ಜ್‌ನಲ್ಲಿ ಮ್ಯಾನೇಜರಾಗಿ ಕೆಲಸಕ್ಕೆ ಸೇರಿದೆ. ಪ್ರೀತಿಯ ಸಹೋದ್ಯೋಗಿಗಳೆ, ನನ್ನ ಪ್ರಾರಬ್ಧ ಕಥೆ ನಿಮ್ಮನ್ನು ಬೋರು ಹೊಡೆಸುವುದಿಲ್ಲ ಎಂದು ನಂಬುತ್ತೇನೆ.
ಲಾಡ್ಜ್‌ನಲ್ಲಿ ಕೆಲಸ ಬಿಟ್ಟು ಊರಿನಲ್ಲಿ ದಿನೇಶ್ ಬೀಡಿಯ ಸ್ಪೆಷಲ್ ಬ್ರಾಂಚ್‌ನಲ್ಲಿ ಕೆಲಸಕ್ಕೆ ಸೇರಿದೆ. ಅದರ ಮಧ್ಯೆ ಕಾಸರಗೋಡು ನ್ಯಾಷನಲ್ ಹೈ ವೇ ಸಬ್‌ಡಿವಿಷನ್‌ನ ಕೆಳಗೆ ಚಂದ್ರಗಿರಿ ಸೇತುವೆಯ ಸರ್ವೇ ಕೆಲಸಕ್ಕೆ ನನಗೆ ಅವಕಾಶ ಸಿಕ್ಕಿತು. ಅಲ್ಲಿಂದ ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಮೂಲಕ ಜಲ ಪ್ರಾಧಿಕಾರದಲ್ಲಿ ಮೂರು ತಿಂಗಳಂತೆ ಎರಡು ಬಾರಿ ಕೆಲಸ ಸಿಕ್ಕಿತು. ಆ ಸಮಯದಲ್ಲಿ ಕೇರಳ ವಿಶ್ವವಿದ್ಯಾಲಯದ ಪದವಿ ಪೂರ್ವ ದೂರ ಶಿಕ್ಷಣ ಕೋರ್ಸ್‌ಗೆ ಸೇರಿದೆ. ಅನಂತರ ಎಂಪ್ಲಾಯ್‌ಮೆಂಟ್ ಮೂಲಕ ಮಣ್ಣು ಸಂರಕ್ಷಣೆ ವಿಭಾಗದಲ್ಲಿ ಕೆಲಸ ಸಿಕ್ಕಿತು. ಆ ಸಂದರ್ಭದಲ್ಲಿ ಪದವಿಪೂರ್ವ ಮತ್ತು ಬಿಕಾಂನಲ್ಲಿ ಉತ್ತೀರ್ಣನಾದೆ. ಕೊನೆಗೆ ನನ್ನ ಎಲ್ಲ ಕಷ್ಟಗಳೂ ದೂರವಾಗಿ ನನಗೊಂದು ಸರಕಾರಿ ಕೆಲಸ ಸಿಕ್ಕಿತು. ನಾಲ್ಕನೆ ಕ್ಲಾಸಿನಲ್ಲಿ ಕಲಿಕೆ ನಿಲ್ಲಿಸುವಾಗ ಒಮ್ಮೆಯೂ ಹೀಗೊಂದು ಸ್ಥಿತಿಗೆ ತಲುಪಬಹುದೆಂದು ನಿರೀಕ್ಷಿಸಿರಲಿಲ್ಲ. 1983ರಲ್ಲಿ ನೀಲೇಶ್ವರ ಪಂಚಾಯತ್‌ನಲ್ಲಿ ಮೇಲ್ವಿಚಾರಕನಾಗಿ ನೇಮಕಾತಿ ಸಿಕ್ಕಿತು. ಅದೇ ಸಮಯದಲ್ಲಿ ಜಿಸಿಡಿಎನಲ್ಲಿ ಮತ್ತು ಸರ್ವೇ ಲ್ಯಾಂಡ್ ರೆಸಾರ್ಟ್‌ನಲ್ಲಿ ನೇಮಕಾತಿಯಾಯಿತು, ಆದರೂ ಹೋಗಲಿಲ್ಲ. ಈ ಸಂದರ್ಭದಲ್ಲಿಯೂ ಅಧ್ಯಯನ ನಿಲ್ಲಿಸಲಿಲ್ಲ. 1988ರಲ್ಲಿ ಎಂಕಾಂ ಉತ್ತೀರ್ಣನಾದೆ. ಬಳಿಕ ಮುನಿಸಿಪಲ್ ಸರ್ವೀಸ್‌ಗೆ ಅವಕಾಶ ಸಿಕ್ಕಿತು. ಕಾಸರಗೋಡು ಹಾಗೂ ತಳಿಪ್ಪರಂಬ್‌ನಲ್ಲಿ ಬಿಲ್ಡಿಂಗ್ ಇನ್ಸ್‌ಪೆಕ್ಟರಾಗಿ ಕೆಲಸ ನಿರ್ವಹಿಸಿದೆ. ಅನಂತರ ಕಲ್ಲಿಕೋಟೆ ಕಾರ್ಪೊರೇಷನ್‌ಗೆ ವರ್ಗಾವಣೆ ಮಾಡಿಸಿಕೊಂಡೆ.
ಈ ವರ್ಗಾವಣೆ, ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಅರೆಕಾಲಿಕ ಕೋರ್ಸ್‌ನಲ್ಲಿ ಎಂಜಿನಿಯರ್ ಡಿಪ್ಲೊಮಾಗೆ ಸೇರಲು ನನಗೆ ಅನುಕೂಲವಾಯಿತು. ಅದರಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣನಾದೆ. ಮೂರು ವರ್ಷಗಳ ಬಳಿಕ ಮಟ್ಟನ್ನೂರ್ ನಗರಸಭೆಯಲ್ಲಿ ಎಂಜಿನಿಯರಾಗಿ ಭಡ್ತಿ ಸಿಕ್ಕಿತು. ನಾಲ್ಕನೆ ತರಗತಿ ಕಲಿತವನಿಗೆ ಒಮ್ಮೆಯೂ ಕನಸು ಕಾಣಲು ಸಾಧ್ಯವಿಲ್ಲದ ಸ್ಥಾನಕ್ಕೆ ತಲುಪಿದೆ. ಬಳಿಕ ಐದೂವರೆ ವರ್ಷ ನಿಮ್ಮ ಮಧ್ಯೆ ನನ್ನ ಊರಾದ ಪಯ್ಯನ್ನೂರ್ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸಿದೆ. ಈಗ ಕಣ್ಣೂರ್ ವಿಶ್ವ ವಿದ್ಯಾಲಯದ ಬಿ.ಟೆಕ್ ಅರೆಕಾಲಿಕ 5ನೆ ಸೆಮಿಸ್ಟರ್ ವಿದ್ಯಾರ್ಥಿ.
ಇಂದು ಅಕ್ಟೋಬರ್ 31ಕ್ಕೆ ಕೆಲಸದಿಂದ ನಿವೃತ್ತನಾಗುತ್ತಿದ್ದೇನೆ. ಅಧ್ಯಯನ ಮುಂದುವರಿಸುತ್ತೇನೆ. ಒಮ್ಮೆ ಕಲಿಕೆ ನಿಲ್ಲಿಸಿದಲ್ಲಿಂದ ತುಂಬಾ ಕಷ್ಟದಿಂದ ಎದ್ದು ಬಂದಿದ್ದೇನೆ. ಬೀಡಿ ಕಟ್ಟಿದ ಗುರುತು ಈಗಲೂ ಈ ಕೈಗಳಲ್ಲಿ ಕಾಣಬಹುದು. ಅದರಲ್ಲಿ ನನಗೆ ಅಭಿಮಾನವಿದೆ. ನಾಲ್ಕನೆ ತರಗತಿ ಕಲಿತ ನನ್ನನ್ನು ಎಂಜಿನಿಯರ್ ಹುದ್ದೆಯ ತನಕ ತಲುಪಿಸಿದ್ದು ಬೀಡಿ ಕೆಲಸವಾಗಿತ್ತು.
ಹೆಚ್ಚು ಮಾತನಾಡಿ ಈ ಸಂಜೆಯ ಸಮಯದಲ್ಲಿ ನಿಮ್ಮನ್ನು ತೊಂದರೆಪಡಿಸುವುದಿಲ್ಲ. ಇಷ್ಟು ಕಾಲ ನೀವು ನೀಡಿದ ಸಹಕಾರಕ್ಕೆ ಕೃತಜ್ಞತೆಗಳು.’’
ಆ ಸಂಜೆ ಪಯ್ಯನ್ನೂರ್ ನಗರಸಭೆಯ ಸಭಾಂಗಣದಲ್ಲಿನ ವೇದಿಕೆಯು ಸಂಕಟವನ್ನು ಅದುಮಿಡಲು ಪಾಡುಪಡುತ್ತಿತ್ತು.

No comments:

Post a Comment